ಷಾನ್‍ಪಾಲ್ಯಾನ್, ಜೀನ್ ಫ್ರಾಂಕ್ವಾ
	1790-1832. ಈಜಿಪ್ಟಿನ ಚರಿತ್ರೆಯ ಬಗ್ಗೆ ಮಹತ್ತರ ಶೋಧನೆಗಳನ್ನು ಮಾಡಿ ಹೆಸರು ಗಳಿಸಿದ ವಿದ್ವಾಂಸ. ಈತ ಫ್ರಾನ್ಸಿನ ಲೋತ್ ಎಂಬಲ್ಲಿ ಜನಿಸಿದ. ಚಿಕ್ಕಂದಿನಲ್ಲೇ ಹೀಬ್ರೂ, ಅರಬ್ಬೀ ಮತ್ತು ಕಾಪ್ಟಿಕ್  ಭಾಷೆಗಳಲ್ಲಿ ಪರಿಣತಿ ಗಳಿಸಿ, ತನ್ನ ಹದಿನಾರನೆಯ ವಯಸ್ಸಿನಲ್ಲಿ ಗ್ರೆನೋಬಲ್ ನಗರದ ವಿದ್ವತ್ ಗೋಷ್ಠಿಯೊಂದರಲ್ಲಿ ಈಜಿಪ್ಟಿನ ಪ್ರಾಚೀನ ಸ್ಥಳನಾಮಗಳು ಕಾಪ್ಟಿಕ್ ಮೂಲದವೆಂದು ಸಾಧಿಸಿ, ಆ ದೇಶದ ಹಳೆಯ ಭಾಷೆ ಕಾಪ್ಟಿಕ್ ಇರಬಹುದೆಂದು ತೋರಿಸಿದ. ಅನಂತರ ಪ್ಯಾರಿಸ್ ನಗರಕ್ಕೆ ತೆರಳಿ ಕಾಪ್ಟಿಕ್ ಭಾಷೆಯನ್ನು ವಿಶೇಷವಾಗಿ ಅಧ್ಯಯನ ಮಾಡಿ ಹೀರಗ್ಲಿಫ್ ಲಿಪಿಯನ್ನು ಅರ್ಥೈಸಲು ಶ್ರಮಿಸಲಾರಂಭಿಸಿದ. ತನ್ನ ಅಸಾಧಾರಣ ಪಾಂಡಿತ್ಯದಿಂದ ಪ್ರಸಿದ್ಧನಾಗಿ, 1809ರಲ್ಲಿ ಗ್ರೆನೋಬಲ್‍ನಲ್ಲಿ ಚರಿತ್ರೆಯ ಪ್ರಾಧ್ಯಾಪಕನಾಗಿ ನೇಮಕಗೊಂಡರೂ ಶೀಘ್ರದಲ್ಲಿಯೇ ಆ ಪದವಿಯನ್ನು ತ್ಯಜಿಸಿ ಪ್ಯಾರಿಸ್ ನಗರಕ್ಕೆ ಹಿಂತೆರಳಿ ಈಜಿಪ್ಟಿನ ಪುರಾತತ್ತ್ವ ಅಧ್ಯಯನ ದಲ್ಲಿ ನಿರತನಾದ. 1823ರ ಸುಮಾರಿನಲ್ಲಿ ರೊಸೆಟ್ಟಾ ಎಂಬ ತ್ರಿಭಾಷಾ ಶಾಸನದ ನೆರವಿನಿಂದ ಈಜಿಪ್ಟಿನ ಹೀರಗ್ಲಿಫ್ ಲಿಪಿಯನ್ನು ಸಮರ್ಪಕವಾಗಿ ಅರ್ಥೈಸಿದ. ಈತನ ಸಂಶೋಧನೆಗಳಲ್ಲಿ ಇದೇ ಅತಿ ಮಹತ್ತ್ವದ್ದೆಂದು ಪರಿಗಣಿತವಾಗಿದೆ. ಅನಂತರ 1824ರಲ್ಲಿ ರಾಜನ ಪ್ರೋತ್ಸಾಹದಿಂದ ಇಟಲಿ ದೇಶಕ್ಕೆ ತೆರಳಿ ಅಲ್ಲಿಯ ವಸ್ತುಸಂಗ್ರಹಾಲಯಗಳಲ್ಲಿದ್ದ ಪ್ರಾಚೀನ ಈಜಿಪ್ಟಿನ ಪ್ಯಾಪಿರಸ್ ಹಸ್ತಪ್ರತಿಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದ. 1826ರಲ್ಲಿ ಪ್ಯಾರಿಸ್ಸಿನ ಲೂವ್ರೆ ವಸ್ತುಸಂಗ್ರಹಾಲಯದಲ್ಲಿ ಈಜಿಪ್ಟ್ ಪ್ರಾಚ್ಯ ವಸ್ತು ವಿಭಾಗದ ಮುಖ್ಯಾಧಿಕಾರಿಯಾಗಿ, ಈಜಿಪ್ಟ್ ದೇಶಕ್ಕೆ ತೆರಳಿ ಅಲ್ಲಿಯ ಪ್ರಾಚ್ಯಾವಶೇಷಗಳ ಬಗ್ಗೆ ಸಂಶೋಧನೆ ನಡೆಸಿದ. 1831ರಲ್ಲಿ ಕಾಲೇಜ್ ಡಿ ಫ್ರಾನ್ಸ್‍ನಲ್ಲಿ ಇವನಿಗಾಗಿಯೇ ಸ್ಥಾಪಿಸಲಾದ ಈಜಿಪ್ಟ್ ಪುರಾತತ್ತ್ವ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದ. ಆದರೆ ಮುಂದಿನ ವರ್ಷವೇ ಮೃತನಾದ. 

	ವಿದ್ವಾಂಸರಿಗೆ ಕಗ್ಗಂಟಾಗಿದ್ದ ಹೀರಗ್ಲಿಫ್ ಲಿಪಿಯನ್ನು ಇವನು ಅರ್ಥೈಸಿದ ಅನಂತರ ಈಜಿಪ್ಟ್‍ನಲ್ಲಿ ದೊರೆತ ಅನೇಕ ಶಾಸನ ಮತ್ತು ಗ್ರಂಥಗಳ ಅಧ್ಯಯನ ಸುಲಭವಾಗಿ, ಆ ದೇಶದ ಪುರಾತತ್ತ್ವ ಅಧ್ಯಯನದ ಗತಿಯೇ ಬದಲಾಯಿಸಿತು. ಈ ಕಾರಣದಿಂದಾಗಿ ಇವನನ್ನು ಈಜಿಪ್ಟಿನ ವೈಜ್ಞಾನಿಕ ಪ್ರಾಕ್ ಸಂಶೋಧನೆಯ ಪ್ರವರ್ತಕನೆಂದು ಕರೆಯುವ ರೂಢಿಯಿದೆ. ಈಜಿಪ್ಶಿಯನ್ ವ್ಯಾಕರಣ, ಹೀರಗ್ಲಿಫ್ ಲಿಪಿಕೋಶ ಈತನ ಮುಖ್ಯ ಗ್ರಂಥಗಳು. 					
	    (ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ